ನನ್ನನ್ನ ಸದಾ ಕಾಡೋ ಸ್ಥಳಗಳ ಪೈಕಿ ಇದೂ ಒಂದು. ಇದೊಂದು ದೇವಾಲಯವನ್ನ ನಾನು ಇವತ್ತಿನವರೆಗೂ ಕೇವಲ ಭಕ್ತಿಯಿಂದಾ ಕಂಡಿಲ್ಲ.. ಆದ್ರೆ ನನ್ನ ಪಾಲಿಗೆ ಇದೊಂದು ವಿಸ್ಮಯ. ನನ್ನನ್ನ ಯಾವತ್ತಿಗೂ ಕಾಡೋದು ಅದರ ಅಗಾಧತೆ, ತಂತ್ರಜ್ಞಾನ ಹಾಗೂ ಅದನ್ನ ಕಟ್ಟಿದವರ ಕಮಿಟ್ಮೆಂಟ್. ಅವತ್ತಿಗೆ ಜಗತ್ತಿನ ಸಾಕಷ್ಟು ದೇಶಗಳ ಜನಕ್ಕೆ ಬಟ್ಟೆ ಹಾಕ್ಕೊಳೋದೂ ಗೊತ್ತಿರಲಿಲ್ಲ. ಅಮೆರಿಕಾ ಅನ್ನೋ ದೇಶದ ಜನಾ ಅನಾಗರಿಕರ ಥರಾ ಬಾಳ್ತಿದ್ರು. ಬ್ರಿಟನ್ನಲ್ಲಿ ರೋಮನ್ನರ ಆಡಳಿತ ನಡೀತಿತ್ತು. ಅಲ್ಲಿದ್ದದ್ದು ಬುಡಕಟ್ಟು ಜನ. ಅವರಿಗೆ ಯಾವ ಆಧುನಿಕತೆಯ ಸ್ಪರ್ಶಾನೂ ಇರಲಿಲ್ಲಾ.. ಅಂಥಾ ದಿನಗಳಲ್ಲಿ ಭಾರತದಲ್ಲಿ ಅದರಲ್ಲೂ ನಮ್ಮ ದಕ್ಷಿಣ ಭಾರತದಲ್ಲಿ ಒಂದು ಭವ್ಯ ಆಲಯ ತಲೆ ಎತ್ತಿ ನಿಂತ್ಕೊಳತ್ತೆ. ಅದರ ವಾಸ್ತು ಶಾಸ್ತ್ರ ಹೇಗಿದೆ ಅಂದ್ರೆ, ಅಲ್ಲಿನ ಸೈನ್ಸ್ ಬಗ್ಗೆ ಇವತ್ತಿಗೂ ಜಗತ್ತಿನ ನಾನಾ ದೇಶಗಳ ವಿಜ್ಞಾನಿಗಳು ತಲೆಗೆ ಹುಳು ಬಿಟ್ಕೊಂಡು ಹುಡುಕ್ತಾ ಕೂತಿದಾರೆ.
ಇಷ್ಟಕ್ಕೂ ನಾನಿಲ್ಲಿ ಹೇಳ್ತಿರೋದು ತಂಜಾವೂರಲ್ಲಿರೋ ಬೃಹದೀಶ್ವರ ದೇವಾಲಯದ ಬಗ್ಗೆ. ನನಗೆ ರಾಜ ರಾಜಚೋಳ ಅಂದ್ರೆ ಅದೇನೋ ಪ್ರೀತಿ. ಅದಕ್ಕೆ ಕಾರಣಗಳು ಒಂದೆರಡಲ್ಲ. ಸಾವಿರ ಸಾವಿರ. ಹನ್ನೊಂದನೇ ಶತಮಾನದ ಹೊತ್ತಿಗಾಗಲೇ, ಒಂದು ಸುಸಜ್ಜಿತ ನೌಕಾಪಡೆಯನ್ನ ಹೊಂದಿದ್ದ ದಕ್ಷಿಣದ ಅರಸ ಅವನು. ಬಾಹುಬಲಿ. ಮೂರು ಸಮುದ್ರಗಳ ನಡುವಿನ ಸುವಿಶಾಲ ಸಾಮ್ರಾಜ್ಯವನ್ನ ಆಳ್ತಿದ್ದ. ಅಷ್ಟೇ ಅಲ್ಲಾ, ಸಮುದ್ರದ ಆಚೆಗೆ ಕೂಡಾ ತನ್ನ ರಾಜ್ಯವನ್ನ ವಿಸ್ತರಿಸಿದ್ದ.
ಇವತ್ತು ಜಗತ್ತಿನ ಯಾವುದೇ ಮೂಲೆಗೆ ಹೋದ್ರೂ ಅಲ್ಲಿ ಒಬ್ಬ ತಮಿಳ, ಒಬ್ಬ ಮಲೆಯಾಳಿ ಸಿಗ್ತಾರೆ ಅಂತಾ ಹೇಳ್ತಾರಲ್ಲಾ, ಹಾಗೆ ಅವರು ಸಿಗೋದಕ್ಕೆ ಬೀಜಾಂಕುರ ಮಾಡಿದವರೇ ಚೋಳ ಅರಸರು. ಸಮುದ್ರ ದಾಟಿ, ಕಾಂಬೋಜದವರೆಗೆ ರಾಜ್ಯ ವಿಸ್ತರಿಸಿದ್ದಲ್ಲದೇ, ಆಗ್ನೇಯ ಏಶಿಯಾದಲ್ಲಿ ಸನಾತನ ಧರ್ಮದ ಧ್ವಜ ನೆಟ್ಟವರು ಚೋಳರು.ಅಂಥಾ ಚೋಳ ಕುಲ ತಿಲಕ ರಾಜ ರಾಜ ಚೋಳನ ಕನಸಲ್ಲಿ ಒಂದಿನಾ ಈಶ್ವರ ಕಾಣಿಸಿಕೊಂಡ ಹಾಗಾಯ್ತಂತೆ. ಅಲ್ಲಿ ಅವರೇನು ಮಾತಾಡಿಕೊಂಡ್ರೋ ಗೊತ್ತಿಲ್ಲ, ಬೆಳಿಗ್ಗೆ ಎದ್ದವನೇ ರಾಜ ತಂಜಾವೂರಲ್ಲಿ ಒಂದು ದೇವಾಲಯ ಕಟ್ಟಬೇಕು ಅಂತಾ ಆಜ್ಞೆ ಮಾಡಿ ಬಿಟ್ಟ. ಅದಕ್ಕೆ ಸಮರೋಪಾದಿಯಲ್ಲಿ ಕೆಲಸಾ ಶುರುವಾಯ್ತು. ಸುಮಾರು ಒಂದು ಲಕ್ಷ ಮೂವತ್ತು ಸಾವಿರ ಟನ್ ಗ್ರಾನೈಟ್ ತರಿಸಲಾಯ್ತು. ನಿಮಗೆ ಗೊತ್ತಿರಲಿ, ತಂಜಾವೂರಿನಿಂದಾ ನೂರು ಕಿಲೋಮೀಟರ್ ದೂರದಲ್ಲೆಲ್ಲೂ ಗ್ರಾನೈಟ್ ಗಣಿಗಳಿಲ್ಲ. ಆದ್ರೆ ಆ ಪುಣ್ಯಾತ್ಮ ಅದೆಲ್ಲಿಂದಾ ಅಷ್ಟೊಂದು ಗ್ರಾನೈಟ್ ತರಿಸಿದ್ನೋ, ಅದು ಹೇಗೆ ಅದನ್ನ ನೂರಾರು ಕಿಲೋಮೀಟರುಗಳಷ್ಟು ದೂರಕ್ಕೆ ತಂದು ಗುಟ್ಟೆ ಹಾಕಿದ್ನೋ ದೇವರೇ ಬಲ್ಲ.
ಹಾಗೆ ತರಿಸಿದ ಗ್ರಾನೈಟ್ ಶಿಲೆಗಳನ್ನ ಬಳಸಿ ಬೃಹತ್ ಆಲಯ ಕಟ್ಟಿಸಿದ. ಅದೂ ಎಷ್ಟು ದೊಡ್ಡದೂ ಅಂತೀರಿ ಸುಮಾರು 216 ಅಡಿ ಎತ್ತರದ ಹದಿನಾರು ಮಹಡಿಗಳುಳ್ಳ ಆಲಯ. ಅದರ ಮೇಲೆ ಹತ್ತು ಟನ್ ತೂಕದ ರಾಜ ಗೋಪುರದ ಬಂಡೆ ಇಡಿಸಿದನಂತೆ.
ಆ ದೊಡ್ಡ ಕಲ್ಲನ್ನ 216 ಅಡಿ ಮೇಲಕ್ಕೆ ಅದು ಹೇಗೆ ಸಾಗಿಸಿದ್ರು ಅಂದ್ರೆ, ಸುಮಾರು ಆರು ಮೈಲಿಗಳ ದೂರದವರೆಗೆ ಒಂದು ಏರು ದಾರಿಯನ್ನ ನಿರ್ಮಿಸಿ ಅದರ ಮೂಲಕ ಆ ಬೃಹತ್ ಬಂಡೆಯನ್ನ ಆಲಯದ ಮೇಲಕ್ಕೆ ಕೊಂಡೊಯ್ಯಲಾಯ್ತಂತೆ. ಅದನ್ನ ಕುಂಭಂ ಅಂತಾ ಕರೀತಾರೆ.
ನಮ್ಮನ್ನ ಆಶ್ಚರ್ಯಕ್ಕೀಡು ಮಾಡೋ ಇನ್ನೊಂದು ವಿಷಯ ಏನೂ ಅಂದ್ರೆ, ಇಲ್ಲಿನ ಶಿವಲಿಂಗ. ಅದು ಒಂದೇ ಸುಣ್ಣದ ಕಲ್ಲಿಂದಾ ತಯಾರಾದ ಒಂಭತ್ತೂ ವರೆ ಅಡಿ ಎತ್ತರದ ಶಿವಲಿಂಗ. ಇಷ್ಟಕ್ಕೂ ಇದನ್ನೆಲ್ಲಾ ಕಟ್ಟೋದಕ್ಕೆ ಚೋಳ ರಾಜನಿಗೆ ಹಿಡಿದ ಸಮಯ ಎಷ್ಟು ಗೊತ್ತಾ..?
1004 ರಲ್ಲಿ ಆರಂಭವಾದ ಕೆಲಸ 1009 ರ ಹೊತ್ತಿಗೆ ಪೂರ್ಣಗೊಂಡಿತ್ತು. ಅದನ್ನ ಅವನು 1010ರಲ್ಲಿ ಉದ್ಘಾಟನೆ ಮಾಡಿದ್ದ. ಅಂದ್ರೆ ಸುಮಾರು ಆರು ವರ್ಷ. ಎಲ್ಲಾ ತಂತ್ರಜ್ಞಾನಗಳಿದ್ದೂ, ನಮ್ಮ ಸರ್ಕಾರಿ ಕಟ್ಟಡಗಳನ್ನ ಕಟ್ಟೋದಕ್ಕೆ ನಮಗೆ ಇವತ್ತು ಹತ್ತಾರು ವರ್ಷ ಬೇಕು. ಅಂಥಾದ್ರಲ್ಲಿ, ಏನೂ ಇಲ್ಲದ ಕಾಲದಲ್ಲೇ ಚೋಳರಸರು ಒಂದು ಬೃಹತ್ ಆಲಯವನ್ನ ಕೇವಲ ಆರು ವರ್ಷಗಳಲ್ಲಿ ಲೋಕಾರ್ಪಣೆಗೊಳಿಸಿದ್ರು. ಅಲ್ಲಿನ ಬೃಹತ್ ಲಿಂಗದ ಕಾರಣದಿಂದಾಗಿ ಆ ದೇವಾಲಯವನ್ನ ಬೃಹದೀಶ್ವರ ಅಂತಾ ಕರೀತಾರೆ.
ಅಲ್ಲಿನ ಮನಮೋಹಕ ಕೆತ್ತನೆಗಳನ್ನ ನೀವೊಂದು ಸಾರಿ ನೋಡಬೇಕು. ಲೇಸರ್ ತಂತ್ರಜ್ಞಾನ ಬಳಕೆ ಮಾಡೋ ಕಾಲದಲ್ಲೂ ಅಷ್ಟು ನಿಖರವಾದ ಕುಸರಿ ಕೆಲಸಾ ಮಾಡೋದಕ್ಕೆ ಸಾಧ್ಯವಿಲ್ಲ. ಅಂಥದರಲ್ಲಿ, ರಾಜ ರಾಜ ಚೋಳ ಒಂದು ಅದ್ಭುತ ಕಲಾ ಲೋಕವನ್ನೇ ಅಲ್ಲಿ ಸೃಷ್ಟಿ ಮಾಡಿದಾನೆ.
ನಿಮಗೆ ಸಾಧ್ಯವಾದ್ರೆ ಒಂದು ಬಾರಿ ತಂಜಾವೂರಿನ ಬೃಹದೀಶ್ವರ ದೇವಾಲಯವನ್ನ ನೋಡಿಕೊಂಢು ಬನ್ನಿ. ಅಷ್ಟರೊಳಗೆ, ಕೆಳಗಿನ ವಿಡಿಯೋ ಒಮ್ಮೆ ನೋಡಿ ಬಿಡಿ. ಅದು ನಿಮಗೆ ಆಲಯವನ್ನ ಸಂಕ್ಷಿಪ್ತವಾಗಿ ಪರಿಚಯ ಮಾಡಿ ಕೊಡತ್ತೆ.







Leave a Reply