ಬಲ್ಲಿರಾ ಬೆಟ್ಟದ ನೆಲ್ಲಿಯ ಮಹಿಮೆಯಾ..!?

ಹುಳಿ, ಕಹಿ ಒಗರಿನ ನೆಲ್ಲಿ ಕಾಯಿನ ಚಪ್ಪರಿಸಿ ತಿನ್ನೋದು, ಆಮೇಲೆ ನೀರು ಕುಡಿದು ಬಾಯಿ ಸಿಹಿ ಮಾಡ್ಕೊಳ್ಳೋದು  ಅಂದ್ರೆ ಎಂತಾ ಮಜಾ ಅಲ್ವಾ..? ಈ ನೆಲ್ಲಿಕಾಯಿ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾ..?. ನೆಲ್ಲಿಕಾಯಿಯ ಈ ವಿಚಾರಗಳನ್ನ ನೀವು ತಿಳ್ಕೊಳ್ತಾ ಹೋದ್ರೆ ನಿಜಕ್ಕೂ ನಿಬ್ಬೆರಗಾಗಿ ಬಿಡ್ತೀರಾ. ಅಂತಹ ಒಂದಷ್ಟು ಮಾಹಿತಿನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇವೆ.

ಆರೋಗ್ಯ ವೃದ್ದಿಸುವ ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಮಲೆನಾಡಿನ ಹಸಿರು ತಪ್ಪಲಲ್ಲಿ, ಬೆಟ್ಟ ಗುಡ್ಡಗಳಲ್ಲಿ, ಹಸನಾಗಿ ಬೆಳೆಯುವ ನೆಲ್ಲಿಕಾಯಿ ಅಪಾರವಾದ ಜೀವಾಮೃತವನ್ನೇ ಮೈದುಂಬಿಕೊಂಡಿರುತ್ತೆ. ಬಾಯಲ್ಲಿ ನೀರೂರಿಸುವಂತೆ ಮಾಡೋ ಬೆಟ್ಟದ ನೆಲ್ಲಿಕಾಯಿ ದೇಹದ ಹಲವು ಸಮಸ್ಯೆಗಳನ್ನು ಪರಿಹರಿಸಬಲ್ಲ ದಿವ್ಯೌಷಧಿ. “ ಫಿಲಂತಸ್ ಎಂಬ್ಲಿಕ “ ಅನ್ನೋದು ಇದರ ವೈಜ್ಞಾನಿಕ ಹೆಸರು. ಸಂಸ್ಕೃತದ ಅಮಲಕಿಯಿಂದ  ಎಂಬ್ಲಿಕ್ ಮೈರೋಬಾಲನ್  ಅಥವಾ ಆಮ್ಲಾ ಅನ್ನೋ ಆಂಗ್ಲ ನಾಮವನ್ನ ಇದು ಪಡ್ಕೊಂಡಿದೆ.

ಪೂಜೆಗೂ ಸಲ್ಲುತ್ತೆ ನೆಲ್ಲಿಕಾಯಿ

 ಭಾರತೀಯ ಆಯುರ್ವೇದ ಪದ್ದತಿಯಲ್ಲಿ ಬೆಟ್ಟದ ನೆಲ್ಲಿಕಾಯಿಗೆ ವಿಶೇಷವಾದ ಸ್ಥಾನವಿದೆ. ಭಾರತೀಯ ಧಾರ್ಮಿಕ ಪರಂಪರೆಯಲ್ಲೂ ಕೂಡ ಬೆಟ್ಟದ ನೆಲ್ಲಿಕಾಯಿಗೆ ತನ್ನದೇ ಆದ ಗೌರವ ಇದೆ. ಕಾರ್ತೀಕ ಮಾಸದ ಉತ್ಥಾನ ದ್ವಾದಶಿ ದಿನ ಬೆಟ್ಟದ ನೆಲ್ಲಿಕಾಯಿ ತುದಿ ಕತ್ತರಿಸಿ ತುಳಸಿಗೆ ಆರತಿ ಬೆಳಗುತ್ತಾರೆ. ಈ ದಿವಸ ಶ್ರೀಕೃಷ್ಣ ಪರಮಾತ್ಮ ತುಳಸಿಯ ಜೊತೆ ವಿವಾಹವಾದ ಎನ್ನುವುದು ಪ್ರತೀತಿ. ಇದೇ ಕಾರಣಕ್ಕೆ ಮಹಿಳೆಯರು ತುಳಸಿ ಗಿಡದ ಜೊತೆ ಬೆಟ್ಟದ ನೆಲ್ಲಿಕಾಯಿ ಟೊಂಗೆ ಇಟ್ಟು ಪೂಜಿಸುತ್ತಾರೆ.

ತುಳಸಿ ವಿವಾಹ

ನಿಮಗೆ ಗೊತ್ತಿರ್ಲಿ, ಕೋವಿಡ್ 19 ಅನ್ನೋ ರಕ್ಕಸ ಚೀನಿ ವೈರಾಣು ಇಡೀ ಜೀವ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಸಂದರ್ಭದಲ್ಲಿ  ವಿಟಮಿನ್ ಸಿ ವಿಚಾರ ಬಹಳಷ್ಟು ಮಹತ್ವ ಪಡೆದುಕೊಳ್ತು. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಹಣ್ಣು ಹಂಪಲುಗಳ ಜೊತೆಗೆ ಬೆಟ್ಟದ ನೆಲ್ಲಿಕಾಯಿಯ ಬಳಕೆಯ ಬಗ್ಗೆ ಆರೋಗ್ಯ ತಜ್ಞರು ಸಲಹೆ ನೀಡೋಕೆ ಶುರು ಮಾಡಿದ್ರು. ಆಗಿನಿಂದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಕಂಡ ನೆಲ್ಲಿಕಾಯಿ ಈಗಲೂ ಒಂದು ಸ್ಥಿರವಾದ ಬೆಲೆಯನ್ನ ಕಾಯ್ದುಕೊಂಡಿದೆ. ಒಂದು ಅಧ್ಯಯನದ ಪ್ರಕಾರ ಗ್ರಾಮೀಣ ಪ್ರದೇಶಕ್ಕಿಂತ ನಗರ ವಾಸಿಗಳೇ ಬೆಟ್ಟದ ನೆಲ್ಲಿಕಾಯಿಯನ್ನು ಅತಿ ಹೆಚ್ಚು ಬಳಸ್ತಾ ಇದ್ದಾರೆ ಅಂತ ಹೇಳಲಾಗ್ತಾ ಇದೆ.

ನಮ್ಮ ಆರೋಗ್ಯವನ್ನ ಕಾಪಾಡುವ ನಿಟ್ಟಿನಲ್ಲಿ ನೆಲ್ಲಿಕಾಯಿಯ ಪಾತ್ರವನ್ನ ಖಂಡಿತ ಅಲ್ಲಗಳೆಯುವಂತಿಲ್ಲ.  ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಬಿ.ಪಿ, ಶುಗರ್ ಸಮಸ್ಯೆಗಳನ್ನು ನಿಯಂತ್ರಣದಲ್ಲದರಲ್ಲೂ  ಬೆಟ್ಟದ ನೆಲ್ಲಿಕಾಯಿ ಎತ್ತಿದ ಕೈ. ಇದರ ಹತ್ತು ಹಲವು ಪ್ರಯೋಜಗಳ ಬಗ್ಗೆ ಬಳಸುವ ವಿಧಾನದ ಬಗ್ಗೆ ಒಂದಷ್ಟು ಗಮನ ಹರಿಸೋಣ ಬನ್ನಿ.

ದಿವ್ಯೌಷಧ ನೆಲ್ಲಿಕಾಯಿ

ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿದ್ರೆ

ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟೀ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಗುಣವಾಗುತ್ವೆ

ಬ್ಲಾಕ್ ಬೆರ್ರಿ ಮತ್ತು ಹಾಗಲಕಾಯಿ ಜ್ಯೂಸ್ ಮಿಶ್ರಣ ಮಾಡಿ  ಸೇವನೆ ಮಾಡಿದ್ರೆ ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಬರುತ್ತೆ. ಮತ್ತೊಂದು ವಿಧಾನದ ಪ್ರಕಾರ ಮಧುಮೇಹ ನಿಯಂತ್ರಣಕ್ಕೆ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಶಿಣ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ರೀತಿಯಾಗಿ ಕಷಾಯವನ್ನು ಮಾಡಿಕೊಂಡು ಪ್ರತಿನಿತ್ಯ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ಬರುತ್ತೆ.

 ಅದೇ ರೀತಿ ರಕ್ತದ ಒತ್ತಡ, ಮಧುಮೇಹ ಇದ್ದವರಿಗೆ ಹೃದಯದ ಸಮಸ್ಯೆ ಸಾಮಾನ್ಯ. ಕೆಲವರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾದಷ್ಟು ಹೃದಯದ ಆರೋಗ್ಯ ಹದಗೆಡುತ್ತಾ ಹೋಗುತ್ತವೆ. ಇಂತಹ ಪ್ರಕರಣಗಳಲ್ಲಿ ಅಮೈನೋ ಆಮ್ಲಗಳು ಮತ್ತು ಆಂಟಿ – ಆಕ್ಸಿಡೆಂಟ್ ಅಂಶಗಳು ನಿಮ್ಮ ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುವಲ್ಲಿ ಸಹಾಯಕ್ಕೆ ಬರುತ್ತವೆ. ಈ ಎರಡು ಅಂಶಗಳು ಬೆಟ್ಟದ ನೆಲ್ಲಿಕಾಯಿಯಲ್ಲಿ ಇದೆ.

ತಲೆ ಕೂದಲು ಉದುರುವಿಕೆ ಸಮಸ್ಯೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುವವರು ನೆಲ್ಲಿಕಾಯಿಯ ಜ್ಯೂಸ್ ಜೊತೆಗೆ ಅಲೋವೆರಾ ಜ್ಯೂಸ್ ಬಳಕೆ ಮಾಡಿದರೆ ಉತ್ತಮ.

ಕಣ್ಣಿನ ಸಮಸ್ಯೆಯನ್ನು ಹೊಂದಿದವರಿಗೆ ನೆಲ್ಲಿಕಾಯಿ ಜೂಸ್ ಸಾಕಷ್ಟು ಸಹಾಯ ಮಾಡುತ್ತದೆ ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ನೀರಿಗೆ ಸ್ವಲ್ಪ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ದೀರ್ಘ ಕಾಲದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಜೊತೆಗೆ ನಿಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳು ಬೆಳಗಿನ ಮಲ ವಿಸರ್ಜನೆಯ ಸಂದರ್ಭದಲ್ಲಿ ಹೊರ ಹೋಗುತ್ತವೆ.

ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ಆಗ ತಾನೆ ತಯಾರು ಮಾಡಿಕೊಂಡ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನಲ್ಲಿ ಅದ್ದಿ ಮುಖದ ಮೇಲೆ ಕಂಡು ಬರುವ ಮೊಡವೆಗಳು, ಕಲೆಗಳು ಮತ್ತು ಕಪ್ಪುಬಣ್ಣದ ಗುರುತುಗಳನ್ನು ಸುಲಭವಾಗಿ ಹೊಗಲಾಡಿಸಿಕೊಳ್ಳಬಹುದು.

ಹಸಿ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.

ಬೆಟ್ಟದ ಹಸಿ ನೆಲ್ಲಿಕಾಯಿಯ ಪೇಸ್ಟ್ ಮಾಡಿಕೊಂಡು, ಅದಕ್ಕೆ ಅರ್ಧ ಚಮಚ ಜೇನು ತುಪ್ಪ ಮತ್ತು ಸ್ವಲ್ಪ ನೀರು ಸೇರಿಸಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತೆ.

ಹಸಿ ಬೆಟ್ಟದ ನೆಲ್ಲಿಕಾಯಿಯ ರಸವನ್ನು ತೆಗೆದುಕೊಂಡು, ಅದಕ್ಕೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತೆ

ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ, ಅಂದರೆ ೨ ಚಮಚ ನೆಲ್ಲಿ ರಸಕ್ಕೆ ೨ ಚಮಚ ಜೇನುತುಪ್ಪ ಬೆರಸಿ ತಿನ್ನುವುದರಿಂದ ಕಫ ನಿವಾರಣೆಯಾಗಿ, ಶೀತವು ಕಡಿಮೆಯಾಗುವುದು.

ಪ್ರತಿದಿನ ನೆಲ್ಲಿಕಾಯಿಯ ರಸ ಸೇವಿಸುವುದರಿಂದ, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಉತ್ಪಾದನೆಯನ್ನು ನಿಯಂತ್ರಿಸಿ, ದೇಹದ ತೂಕ ಕಡಿಮೆ ಆಗುತ್ತೆ.

ಮೂಗಿನಿಂದ ರಕ್ತ ಸೋರುತ್ತಿದ್ದರೆ, ನೆಲ್ಲಿ ಬೀಜಗಳನ್ನು ತುಪ್ಪದಲ್ಲಿ ಹುರಿದು ಸಣ್ಣಗೆ ಪುಡಿಮಾಡಿಕೊಂಡು ಹಣೆಗೆ ಲೇಪಿಸುವುದರಿಂದ ಮೂಗಿನ ರಕ್ತಸ್ರಾವ ನಿಲ್ಲುತ್ತೆ.

ಹಲವು ರೋಗ ನಿವಾರಿಸುತ್ತೆ ನೆಲ್ಲಿಕಾಯಿ

ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ರಾತ್ರೆ ನೆನೆಸಿಟ್ಟು, ನಂತರ ಬೆಳ್ಳಿಗ್ಗೆ ಅದನ್ನು ಸೋಸಿಕೊಂಡು ಆ ನೀರಿಗೆ ನೆಲ್ಲಿಕಾಯಿಯ ಜ್ಯೂಸ್ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ದೇಹವು ತಂಪಾಗಿರುತ್ತೆ

ಕೆಲವರಿಗೆ ಕಣ್ಣಿನ ಸುತ್ತಲೂ ಕಪ್ಪಗಾಗಿರುತ್ತದೆ ಅಂತಹವರು ನೆಲ್ಲಿಕಾಯಿಯ ಪೇಸ್ಟ್ ಮಾಡಿಕೊಂಡು, ಕಣ್ಣಿನ ಸುತ್ತಲೂ ಹಚ್ಚಿಕೊಳ್ಳುವುದರಿಂದ ಕಣ್ಣು ತಂಪಾಗುವುದಲ್ಲದೆ, ನಿಧಾನವಾಗಿ ಕಪ್ಪು ಕಲೆ ನಿವಾರಣೆಯಾಗುತ್ತೆ.

ಉರಿಮೂತ್ರ, ಮಲಬದ್ದತೆ, ರಕ್ತಶುದ್ದಿ, ಅಸ್ತಮಾ, ಅಜೀರ್ಣ, ಯಕೃತ್ತು ಹಾಗೂ ಚರ್ಮ ಸಂಬಂದಿತ ಸಮಸ್ಯೆಗಳು… ಹೀಗೆ ಹಲವಾರು ಸಮಸ್ಯೆಗಳಲ್ಲಿ ಬೆಟ್ಟದ ನೆಲ್ಲಿಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಅಷ್ಟೇ ಅಲ್ಲಾ ಅಕಾಲಿಕವಾಗಿ ವಯಸ್ಸಾದವರಂತೆ ಕಾಣುವ ಸಮಸ್ಯೆಗೂ ನೆಲ್ಲಿಕಾಯಿ ರಾಮಬಾಣ ಇದ್ದಂತೆ.

ಗೆಳೆಯರೇ ಇದು ನೆಲ್ಲಿಕಾಯಿಯ ಕುರಿತು ಇರುವ ಅತ್ಯುಪಯುಕ್ತ ಮಾಹಿತಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಡುವ ಜೊತೆಗೆ ನಿಮ್ಮ ಬಳಗದೊಂದಿಗೆ ಹಂಚಿಕೊಳ್ಳಿ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಮಾಹಿತಿಯೊಂದಿಗೆ ನಿಮ್ಮನ್ನು ಬೇಟಿಯಾಗುತ್ತೇನೆ, ನಮಸ್ಕಾರ.