ಮಕ್ಕಳಲ್ಲಿನ ಕ್ಯಾನ್ಸರ್‌ ಬಗ್ಗೆ ಇಡೀ ಜಗತ್ತೇ ತಲ್ಲಣಗೊಂಡಿರೋದ್ಯಾಕೆ..!!?

Childhood Cancer: Facts and Symptoms

ಸ್ನೇಹಿತರೇ.

ಪ್ರತೀ ವರ್ಷದ ಹಾಗೇ ಈ ವರ್ಷದ ಫೆಬ್ರುವರಿ 15 ರಂದು  ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಿಸಲಾಗ್ತಾ ಇದೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸೋದು, ಕ್ಯಾನ್ಸರ್‌ನ ಮೊದಲ ಹಂತದ ಪತ್ತೆ,  ರೋಗನಿರ್ಣಯ, ಕಡಿಮೆ ಮತ್ತು ಗುಣಮಟ್ಟದ ಔಷಧಿಗಳ ಲಭ್ಯತೆ, ಉತ್ತಮ ಚಿಕಿತ್ಸೆ, ಕ್ಯಾನ್ಸರ್ನಿಂದ ಬಳಲ್ತಾ ಇರೋ ಮಕ್ಕಳಿಗೆ ಉತ್ತಮ ಆರೈಕೆ, ಸ್ವಚ್ಛತೆ, ರೇಡಿಯೊಥೆರಪಿ, ಕೋಬಾಲ್ಟ್-60 ನಂತಹ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡೋದು ಇದರ ಮುಖ್ಯ ಉದ್ದೇಶ.

ಇನ್ನು  ಕ್ಯಾನ್ಸರ್‌ ಅನ್ನೋ ಪದ ಕೇಳಿದ ತಕ್ಷಣ  ಒಂದು ಸಾರಿ ಆತಂಕ, ಭಯ ಶುರುವಾಗುತ್ತೆ. ಸಾಮಾನ್ಯವಾಗಿ ನಾವು ನಮ್ಮ ಚಟಗಳಿಂದ, ಅನುವಂಶೀಯತೆಯಿಂದ, ಅತ್ಯಂತ ಕೆಮಿಕಲ್‌ಗಳ ಅಡ್ಡ ಪರಿಣಾಮದಿಂದ ಕ್ಯಾನ್ಸರ್‌ ಬರುತ್ತೆ ಅಂತ ಅಂದುಕೊಂಡಿರ್ತೀವಿ. ಮೊನ್ನೆ ಮೊನ್ನೆಯಷ್ಟೇ ಅಂತರಾಷ್ಟ್ರೀಯ ಕ್ಯಾನ್ಸರ್‌ ದಿನಾನ ಆಚರಿಸಿದ್ರು. ಈಗ ಮತ್ಯಾಕೆ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್‌ ದಿನ ಅನ್ನೋ ಪ್ರಶ್ನೇನೂ ನಿಮ್ಮಲ್ಲಿ ಇರಬಹುದು. ಅದಕ್ಕೊಂದಿಷ್ಟು ಪೂರಕ ಉತ್ತರಾನ ತಿಳ್ಕೊಳ್ಳೋಣ ಬನ್ನಿ.

ಕ್ಯಾನ್ಸರ್…!!!‌ ಜೀವ ಜಗತ್ತನ್ನ ಕಾಡ್ತಾ ಇರೋ ದೈತ್ಯ ಪ್ರಶ್ನೆ. ಬಹಳಷ್ಟು ಜನ್ರಿಗೆ ಇದು ದೊಡ್ಡವ್ರನ್ನ ಮಾತ್ರ ಕಾಡೋ ಕಾಯಿಲೆ ಅನ್ನೋ ಭಾವನೆ ಇರುತ್ತೆ. ಇನ್ನು ಒಂದ್ಸಾರಿ ಕ್ಯಾನ್ಸರ್‌ ಬಂದ್ರೆ ಅದು ಪೂರ್ಣ ಗುಣ ಆಗಲ್ಲಾ, ಪದೇ ಪದೇ ಬರ್ತಾನೆ ಇರುತ್ತೆ ಅಂತಾನೂ ಅಂದ್ಕೊಂಡಿರ್ತಾರೆ.  ನಿಮಗೆ ಗೊತ್ತಿರ್ಲಿ ಈ ಕ್ಯಾನ್ಸರ್‌ಗೆ ದೊಡ್ಡೋವ್ರು, ಚಿಕ್ಕವ್ರೂ ಅನ್ನೋ ಬೇಧಭಾವ ಇಲ್ಲ. ಇದು  ಆಗ ತಾನೇ ಹುಟ್ಟಿರೋ ಮಕ್ಕಳನ್ನೂ ಬೆಂಬಿಡದೆ ಕಾಡುತ್ತೆ ಅನ್ನೋದು ಎಲ್ಲರೂ ಒಪ್ಕೊಳ್ಳಲೇ ಬೇಕಾಗಿರೋ ಘೋರ ಸತ್ಯ.

 ಕಳೆದ ೨೦೨೦ ರಲ್ಲಿ ಪ್ರತಿಷ್ಟಿತ ಲ್ಯಾನ್ಸೆಟ್‌ ಆಂಕೋಲಜಿ ಆಯೋಗ ಈ ಬಗ್ಗೆ ಮುಂದಿನ ೩೦ ವರ್ಷಕ್ಕೆ ಸಮೀಕ್ಷೆಯೊಂದನ್ನ ಮಾಡಿದೆ. ಅದರ ಪ್ರಕಾರ ಇಡೀ ವಿಶ್ವದ್ಲಲಿ ಸುಮಾರು ೧೩.೭ ಮಿಲಿಯನ್‌ ಮಕ್ಕಳು ಕ್ಯಾನ್ಸರ್‌ಗೆ ಒಳಪಡೋ ಸಾಧ್ಯತೆಗಳು ಇವೆ. ಇನ್ನು ಆಯಾ ದೇಶದ ಆರೋಗ್ಯ ಸೇವೆಗಳ ಮೇಲೆ ಅವಲಂಬನೆ ಮಾಡಿ ಹೇಳೋದಾದ್ರೆ ೧೧ ಮಿಲಿಯನ್‌ಗೂ ಹೆಚ್ಚು ಮಕ್ಕಳು ಇದರಿಂದ ಸಾವನ್ನಪ್ಪೋ ಸಾಧ್ಯತೆ ಅಂತಾ ಹೇಳಲಾಗ್ತ ಇದೆ. ಅದರಲ್ಲೂ ಮಕ್ಕಳಲ್ಲಿ ವಿಶೇಷವಾಗಿ ಕಂಡು ಬರೋ ಮೂತ್ರಜನಕಾಂಗದ ಗ್ರಂಥಿಯಲ್ಲಿ ಸಂಭವಿಸುವ ಗೆಡ್ಡೆ ನ್ಯೂರೋಬ್ಲಾಸ್ಟೊಮಾ, ಮೆದುಳಿನ ಕ್ಯಾನ್ಸರ್, ಮೂಳೆ ಕ್ಯಾನ್ಸರ್ ,ರಕ್ತದ ಕ್ಯಾನ್ಸರ್ , ಆಗ ತಾನೇ ಹುಟ್ಟಿರೋ ಮಕ್ಕಳಲ್ಲಿ ಕಾಣಿಸಿಕೊಳ್ಳೋ ಕಣ್ಣಿನ ಕ್ಯಾನ್ಸರ್‌ ರೆಟಿನೊಬ್ಲಾಸ್ಟೊಮಾ ಇವುಗಳು ಜೀವಕ್ಕೇ ಅಪಾಯ ತರೋ ಸಾಧ್ಯತೆ ಇದೆ.

ಇನ್ನು ಕ್ಯಾನ್ಸರ್‌ ಬಗ್ಗೆ  ನಾವು ಕಳೆದ ಸಂಚಿಕೆನಲ್ಲಿ ಸಾಕಷ್ಟು ಮಾಹಿತಿನ ಕೊಟ್ಟಿರೋದ್ರಿಂದ ಇಲ್ಲಿ ಚುಟುಕಾಗಿ ವಿವರಿಸ್ತೀವಿ. ಟ್ರಿಲಿಯನ್ಗಟ್ಟಲೆ ಜೀವಕೋಶಗಳಿಂದ ರಚನೆ ಆಗಿರೋ ಮನುಷ್ಯನ ದೇಹದಲ್ಲಿ ಕೋಶ ವಿಭಜನೆ ಅನ್ನೋ ಪ್ರಕ್ರಿಯೆ ಮೂಲಕ ಜೀವಕೋಶಗಳು ಬೆಳಿತಾವೆ. ಈ ಜೀವಕೋಶಗಳು ಹಳೆಯದಾದಾಗ ಅಥವ ಹಾನಿಗೊಳಗಾದಾಗ ಅವು ಸತ್ತು ಅವುಗಳ ಜಾಗದಲ್ಲಿ ಹೊಸ ಜೀವಕೋಶಗಳು ಬೆಳೆಯೋದಕ್ಕೆ ಶುರುವಾಗುತ್ತೆ. ಆದ್ರೆ ಈ ಸಹಜವಾದ ಬೆಳವಣಿಯಲ್ಲೇನಾದ್ರೂ ವೆತ್ಯಾಸ ಆದ್ರೆ ಅಲ್ಲಿ ಕ್ಯಾನ್ಸರ್‌ ಉಂಟುಮಾಡೋ ಜೀವಕೋಶಗಳು ಬೆಳೆಯೋಕೆ ಶುರುವಾಗುತ್ತೆ.

ಈ ರೀತಿ ಕ್ಯಾನ್ಸರ್‌ ಬರೋದಕ್ಕೆ ಮುಂಚೆ ಸಾಕಷ್ಟು ಲಕ್ಷಣಗಳು ಕಾಣಿಸ್ಕೊಳ್ತಾವೆ. ಇದ್ದಕ್ಕಿದ್ದಂತೆ ದೇಹದ ಯಾವುದೋ ಭಾಗದಲ್ಲಿ ಗೆಡ್ಡೆಗಳು ಬೆಳೆಯೋದು, ಆಯಾಸ, ಬಾಯಿಂದ ಕೀವು ಬರೋದು, ಕಣ್ಣಿನ ದೃಷ್ಟಿ ಕಡಿಮೆಯಾಗೋದು, ಶಕ್ತಿಹೀನತೆ, ಎದೆಯಲ್ಲಿ ಬದಲಾವಣೆಗಳಾಗೋದು, ವಾಂತಿ, ದೇಹದ ಬಣ್ಣದಲ್ಲಿ ಬದಲಾವಣೆ ಹೀಗೆ ಹಲವು ರೀತಿಯ ಲಕ್ಷಣಗಳು ಇರುತ್ತವೆ. ಸಧ್ಯಕ್ಕೆ ಇರೋ ಅಧೀಕೃತ ಮಾಹಿತಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸರಾಸರಿ ೫೦ ಸಾವಿರಕ್ಕೂ ಹೆಚ್ಚು ಮಕ್ಕಳು ಕ್ಯಾನ್ಸರ್‌ಗೆ ಒಳಗಾಗ್ತಾ ಇದ್ದಾರೆ.

ಮತ್ತೊಂದು ಅಧ್ಯಯನದ ಪ್ರಕಾರ ಭಾರತದ ಹಳ್ಳಿಗಾಡಿನ ಕ್ಯಾನ್ಸರ್‌ ಪೀಡಿತ ಮಕ್ಕಳ ಪೈಕಿ ೮೦% ದಷ್ಟು ಮಕ್ಕಳಿಗೆ ಸರಿಯಾದ ಚಿಕಿತ್ಸೆ ಸಿಕ್ತಾ ಇಲ್ಲ.  ನಮ್ಮ ದೇಶದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ, ಜೊತೆಗೆ ಇರೋ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ಇಲ್ದೇ ಇರೋದು ಇದಕ್ಕೆ ಕಾರಣ, ಇನ್ನು ಬಡ ವರ್ಗದ ಜನ್ರು ಕ್ಯಾನ್ಸರ್‌ ಅಂತಾ ಹೇಳಿದ ತಕ್ಷಣ ಕುಸಿದು ಹೋಗ್ತಾರೆ. ಅದಕ್ಕೆ ಬೇಕಾಗಿರೋ ಟ್ರೀಟ್‌ಮೆಂಟ್‌ಗೆ ಹಣ ಹೊಂದಿಸೋಕೆ ಆಗೋಲ್ಲ ಅನ್ನೋ ಚಿಂತೆ ಅವರನ್ನ ಹತಾಷರನ್ನಾಗಿ ಮಾಡಿ ಬಿಡುತ್ತೆ.

ಹಾಗಂತ ಯಾರೂ ಕೈ ಚೆಲ್ಲೋ ಅಗತ್ಯ ಇಲ್ಲ. ಕ್ಯಾನ್ಸರ್‌ ಪೀಡಿತರ ನೆರವಿಗೆ ಅಂತಾನೇ ಬಹಳಷ್ಟು ಎನ್.ಜಿ.ಓ ಗಳಿವೆ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಆರೋಗ್ಯ ಭಾಗ್ಯ, ದೀನ ದಯಾಳ, ಜ್ಯೋತಿ ಸಂಜೀವಿನಿ ಸೇರಿದ ಹಾಗೆ ಬಹಳಷ್ಟು ಸರ್ಕಾರಿ ಯೋಜನೆಗಳು ಕೂಡ ಇವೆ. ಇವು ಕ್ಯಾನ್ಸರ್‌ ಪೀಡಿತ ಮಕ್ಕಳ ಚಿಕಿತ್ಸೆಗೆ ಅಗತ್ಯ ಇರೋ ಸಹಾಯವನ್ನ ಮಾಡುತ್ತವೆ. ಕ್ಯಾನ್ಸರ್‌ಗೆ ತುತ್ತಾದವರು ಖಿನ್ನತೆಗೆ ಒಳಗಾದರೆ ಖಾಯಿಲೆಯಿಂದ ಹೊರ ಬರುವುದು ಬಹಳ ಕಷ್ಟ. ಚಿಕಿತ್ಸೆಗೆ ಅವರು ಸ್ಪಂದಿಸಿದಾಗ ಮಾತ್ರ ಗುಣಮುಖರಾಗೋಕೆ ಸಾಧ್ಯ. ಇದಕ್ಕೆ ಪ್ರಮುಖವಾಗಿ ಬೇಕಾಗಿರೋದು ಆತ್ಮವಿಶ್ವಾಸ. ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್‌ ದಿನದ ಉದ್ದೇಶ ಕೂಡ ಇದೇ ಆಗಿರೋದ್ರಿಂದ ಸಮಸ್ಯೆ ಇರೋವ್ರು ಖಂಡಿತ ಇದರ ಲಾಭ ಪಡ್ಕೋಬಹುದು. ಈಗಾಗ್ಲೇ ಇದರ ಬಗ್ಗೆ ಸಂಬಂಧಟ್ಟ ಕ್ಯಾನ್ಸರ್‌ ಆಸ್ಪತ್ರೆಗಳು ಮಾಹಿತಿಯನ್ನ ಕೊಡ್ತಾ ಇವೆ. ಗೆಲ್ಲುವ ಅಚಲ ವಿಶ್ವಾಸದ ಜೊತೆಗೆ ಪ್ರಯತ್ನ ಮಾಡಿದರೆ ಖಂಡಿತ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು.

ಸ್ನೇಹಿತ್ರೆ ಇದು ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್‌ ಕುರಿತ ಮಾಹಿತಿ. ಮತ್ತಷ್ಟು ವಿಚಾರಗಳ ಜೊತೆಗೆ ಮತ್ತೆ ಭೇಟಿಯಾಗೋಣ ನಮಸ್ಕಾರ.