ಪೂರ್ವ ಕರಾವಳಿಯಲ್ಲಿ ಚಂಡಮಾರುತ ಅಲರ್ಟ್

Michaung Cyclone

ಬಂಗಾಳ ಕೊಲ್ಲಿ ಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತಿತವಾಗಿದೆ. ಡಿ.3 ಅಥವಾ 4 ರಂದು ಆಂಧ್ರ ತೀರ ಪ್ರದೇಶಗಳಿಗೆ ಈ ಸೈಕ್ಲೂನ್ ಅಪ್ಪಳಿಸಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ ಮಿಚಾಂಗ್ ಅಂತ ಹೆಸರಿಸಲಾಗಿದ್ದು, ಆಂಧ್ರ ಪ್ರದೇಶದ ಮಚಲೀಪಟ್ಟಣಂ ಬಳಿ ಲ್ಯಾಂಡ್ ಫಾಲ್ ಆಗಲಿದೆ ಅಂತ ಐಎಂಡಿ ಮೂಲಗಳು ತಿಳಿಸಿವೆ.
ಈ ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ರೂಪುಗೊಂಡಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ನಿಂದಾಗಿ ಗಾಳಿಯ ವೇಗ ಗಂಟೆಗೆ 60 ರಿಂದ 80 ಕಿಲೋಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆಯು ಈ ಮಿಚಾಂಗ್ ಚಂಡಮಾರುತದಿಂದಾಗಿ ಮುಂದಿನ ಮೂರು ದಿನಗಳ ಕಾಲ ತಮಿಳುನಾಡು ಹಾಗೂ ಆಂಧ್ರಪ್ರದೇಶದ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಅನ್ನೋ ಮುನ್ಸೂಚನೆ ನೀಡಿತ್ತು. ತಮಿಳುನಾಡಿನ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಶನಿವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಿರುವಳ್ಳೂರು ಜಿಲ್ಲೆಯ ಶಾಲಾ-ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿದೆ. ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಶಾಲೆಗಳು ಕೂಡ ಮುಚ್ಚಲ್ಪಟ್ಟಿವೆ.
ರಾಜ್ಯದ ಮೇಲೂ ಈ ಮಿಚಾಂಗ್ ಚಂಡಮಾರುತ ತನ್ನ ಪ್ರಭಾವವನ್ನ ಬೀರಿದ್ದು, ಬೆಳಗಾವಿ, ಬೆಂಗಳೂರು ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.